ಕ್ರಿ.ಪೂ.ಸು.5ನೆಯ ಶತಮಾನದ ಚೀನ ದೇಶದ ಪುರಾತನ ತಾವೋ ಧರ್ಮದ ಸಂಸ್ಥಾಪಕ. ಈತ ಚೌ ಚಕ್ರವರ್ತಿಯ ಆಸ್ಥಾನದಲ್ಲಿ ವರದಿಗಾರನಾಗಿದ್ದ. ಪ್ರಸಿದ್ಧ ತತ್ತ್ವಜ್ಞಾನಿ  ಕಾನ್‍ಫ್ಯೂಷನ್ಸ್ ಸಮಕಾಲೀನ.

ತಾವೋ ಧರ್ಮದ ತತ್ತ್ವಗಳನ್ನು ನಿರೂಪಿಸುವ ತಾವೋ ತೆ ಚಿಂಗ್ ಎಂಬ ತತ್ತ್ವಗ್ರಂಥ ಈತನ ಕೊಡುಗೆ. ಇದು ಸು.ಕ್ರಿ.ಪೂ.200 ಅಥವಾ 100ರಲ್ಲಿ ಸಂಕಲಿತವಾಗಿ ಪರಿಷ್ಕಾರಗೊಂಡಿತೆಂಬ ಅಭಿಪ್ರಾಯವಿದೆ. ಈ ಗ್ರಂಥದಲ್ಲಿ 81 ಚಿಕ್ಕ ವಿಭಾಗಗಳಿವೆ; ಅರ್ಧಕ್ಕಿಂತ ಹೆಚ್ಚು ಭಾಗ ಪ್ರಾಸಬದ್ಧ ಕವಿತೆಯ ರೂಪದಲ್ಲಿದೆ. ಉಳಿದ ಭಾಗ ಗದ್ಯ ರೂಪದಲ್ಲಿದ್ದು ತಾವೋ ಧರ್ಮಬೋಧೆಯನ್ನೂ ಲೋಕೋಕ್ತಿಗಳನ್ನೂ ಒಳಗೊಂಡಿದೆ. 

ತಾವೋ ಎಂದರೆ ಮಾರ್ಗ ಎಂದರ್ಥ. ಆಚರಣೆಯ ಸರಿಯಾದ ಮಾರ್ಗ ಎಂದು ಅದರ ಸಾಂಕೇತಿಕ ಅರ್ಥ. ತಾವೋ ಎಂದರೆ ಅದೊಂದು ನಿತ್ಯವಾದ ಮಾರ್ಗ. ಅದನ್ನು ಯಾರೂ ನಿರ್ಮಿಸಿಲ್ಲ. ಅದರಲ್ಲಿ ಎಲ್ಲವೂ ಇದೆ, ಶೂನ್ಯವೂ ಇದೆ. ಎಲ್ಲದರ ಕಾರಣವೂ ಪರಿಣಾಮವೂ ಅದೇ ಆಗಿದೆ. ಒಳ್ಳೆಯ ಮನುಷ್ಯನ ನೈತಿಕ ಸ್ವಭಾವ ಮತ್ತು ಕೃತಿಗಳ ತತ್ತ್ವವೇ ಅದಾಗಿದೆ. ಲಾವೋತ್ಸೆಯ ಉಪದೇಶದ ತಿರುಳು ಈ ಗ್ರಂಥದ 63ನೆಯ ಪ್ರಕರಣದಲ್ಲಿ ಕಂಡುಬರುತ್ತದೆ. ‘ಉದ್ದೇಶಪೂರ್ವಕವಾಗಿ ಯಾವುದೇ ಕೆಲಸ ಮಾಡದಿರುವುದು, ನಿರಾಯಾಸವಾಗಿ ಎಲ್ಲ ಕೆಲಸಗಳನ್ನೂ ಮಾಡುವುದು, ಸ್ವಾದದ ಅರಿವಿಲ್ಲದೇ ರುಚಿನೋಡುವುದು, ದೊಡ್ಡದನ್ನು ಸಣ್ಣದಾಗಿಯೂ ಸಣ್ಣದನ್ನು ದೊಡ್ಡದಾಗಿಯೂ ಪರಿಗಣಿಸು ವುದು, ನೋವನ್ನು ದಯೆಯಿಂದ ತುಂಬಿಕೊಡುವುದು-ಇದು ತಾವೋ ಧರ್ಮದ ಮಾರ್ಗ’ ಎಂದು ಈ ಪ್ರಕರಣದಲ್ಲಿ ಹೇಳಿದೆ. ಈ ಧರ್ಮದ ಮೇಲೆ ಬೌದ್ಧಧರ್ಮದ ಪ್ರಭಾವ ಅಪಾರವಾಗಿದೆ.

ದೇವರ ಅಸ್ತಿತ್ವದಲ್ಲಿ ಲಾವೋತ್ಸೆಗೆ ನಂಬಿಕೆ ಇದ್ದಿತೋ ಇಲ್ಲವೋ ನಿರ್ದಿಷ್ಟವಾಗಿ ತಿಳಿಯದು. ಲಾವೋತ್ಸೆಯ ಮರಣಾನಂತರ ಐದುನೂರು ವರ್ಷಗಳ ತನಕ ತಾವೋ ಧರ್ಮಕ್ಕೆ ನಿಶ್ಚಿತ ಸ್ವರೂಪ ಬಂದಿರಲಿಲ್ಲ. ಚೀನ ದೇಶದಲ್ಲಿ ಪವಿತ್ರರೆಂದು ಗಣಿಸಲ್ಪಟ್ಟ ತ್ರಿಮೂರ್ತಿಗಳಲ್ಲಿ ಈತನಿಗೆ ದ್ವಿತೀಯ ಸ್ಥಾನವನ್ನು ಕೊಡಲಾಗಿದೆ.                          
(ಡಿ.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ